ಭಾರತೀಯ ಬುಡಕಟ್ಟುಗಳು	
ಭಾರತದಲ್ಲಿಯ ಅನೇಕ ಬುಡಕಟ್ಟುಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಇತರ ಸಾಮಾಜಿಕ ವರ್ಗಗಳೊಂದಿಗೆ ಸಮಾನವಾಗಿ ಬೆಳೆಯಲು ಅವಕಾಶ ಇಲ್ಲದ್ದನ್ನು ಅನುಲಕ್ಷಿಸಿ, ಅಂಥ ವಿವಿಧ ವರ್ಗಗಳನ್ನು ಗುರುತಿಸಿ ಅವಕ್ಕೆ ವಿಶಿಷ್ಟ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಲು ಭಾರತ ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಂವಿಧಾನದ 341, 342ನೆಯ ಅನುಚ್ಛೇದಗಳ ಪ್ರಕಾರ ಅನೇಕ ಬುಡಕಟ್ಟುಗಳನ್ನು ಗುರುತಿಸಿ. ಅವುಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂವಿಧಾನದ ಪರಿಶಿಷ್ಟ ಭಾಗವಾಗಿ ಇದು ಅವುಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂವಿಧಾನದ ಪರಿಶಿಷ್ಟ ಭಾಗವಾಗಿ ಇದು ಸೇರಿದೆ. ಭಾರತದ ವಿವಿಧ ಬುಡಕಟ್ಟುಗಳಿಗೆ ಸೇರಿದ ಜನಸಂಖ್ಯೆ 51,628,638 (1981).

	ಬುಡಕಟ್ಟುಗಳು ಬಲುಮಟ್ಟಿಗೆ ಆದಿವಾಸಿಗಳು. ಆದರೆ ಸಂವಿಧಾನದ ಉದ್ದಿಶ್ಯದಿಂದ ತಯಾರಿಸಲಾದ ಪಟ್ಟಿ ಮತ್ತು ಮಾನವವಿಜ್ಞಾನಿಗಳು ತಮ್ಮ ಸಂಶೋಧನೆಗಳಿಗೆ ಅನುಗುಣವಾಗಿ ಬುಡಕಟ್ಟುಗಳೆಂದು ನಿರ್ಧರಿಸಿ ಸಿದ್ಧಪಡಿಸಿರುವ ವರ್ಗಗಳ ಯಾದಿಯಲ್ಲಿ ಏಕತೆಯಿಲ್ಲ. ಭಾರತದ ಬುಡಕಟ್ಟುಗಳ ಬಗ್ಗೆ ಬಿ.ಎಸ್. ಗುಹಾ, ಥಸ್ರ್ಟನ್, ಲೂಯಿಸ್, ಎಲ್ವಿನ್, ಎಂಥೋವೆನ್, ಎ.ಕೆ. ಅಯ್ಯರ್, ನಂಜುಂಡಯ್ಯ-ಇವರು ಕೆಲವು ವಿವರಗಳನ್ನು ನೀಡಿದ್ದಾರೆ. ಇವರ ಬರೆಹಗಳ ಆಧಾರದ ಮೇಲೆ ಕೆಲವು ಮುಖ್ಯ ಬುಡಕಟ್ಟುಗಳ ಸ್ಥೂಲ ಪರಿಚಯವನ್ನು ಪಡೆಯಬಹುದು.

	ಗೊಂಡರು: ಇವರು ಮಧ್ಯ ಪ್ರದೇಶ ರಾಜ್ಯದಲ್ಲಿ ಹೆಚ್ಚಾಗಿ ವಾಸಿಸುವರು. ಇವರಲ್ಲಿ ಮಾಡಿಯಾ ಮತ್ತು ಮುರಿಯಾ ಎಂಬ ಮುಖ್ಯ ಪ್ರಭೇದಗಳಿವೆ. 'ಗೊಂಡಿ' ಭಾಷೆಯನ್ನು ಆಡುತ್ತಾರೆ. ಇವರು ಕಪ್ಪು ಮಿಶ್ರಿತ ಕಂದು ಬಣ್ಣದವರು. ದಪ್ಪ ತುಟಿ, ಸಾಧಾರಣ ಎತ್ತರ, ಅಲೆದಾಡುವ ತಲೆಗೂದಲು ಇತ್ಯಾದಿ ಇವರ ದೈಹಿಕ ವೈಶಿಷ್ಟ್ಯಗಳು. ವಿದ್ವಾಂಸರಾದ ಹ್ಯಾಡೋನ್ ಇವರನ್ನು ಪೂರ್ವ ದ್ರಾವಿಡ ವರ್ಗಕ್ಕೆ ಸೇರಿಸಿದರೆ ಗುಹಾ ಅವರು ಪ್ರೊಟೊ-ಆಸ್ಟ್ರಲಾಯಡ್ ಜನಾಂಗಕ್ಕೆ ಸೇರಿಸಿದ್ದಾರೆ. ಗೊಂಡರು ತಮ್ಮನ್ನು 'ಕೊಯ್ಟರ್ ಎಂದು ಕರೆದುಕೊಳ್ಳುವರು.

	ಗೊಂಡರು ಮೊದಲು ಆಹಾರ ಶೇಖರಣೆಯಿಂದ ಜೀವನ ನಡೆಸಿದರು. ಕಾಲಾಂತರದಲ್ಲಿ ಕೃಷಿ, ಕೂಲಿ ಕೆಲಸ, ಮರ ಕಡಿಯುವುದು, ಹಾಲು ಮಾರುವುದು ಮುಂತಾದ ಉದ್ಯೋಗಗಳಲ್ಲಿ ತೊಡಗಿಕೊಂಡರು. ಇವರು ಬೇಟೆಗಾರರಾಗಿಯೂ ಪ್ರಸಿದ್ಧರಾಗಿದ್ದರೆಂದು ತಿಳಿದುಬರುತ್ತದೆ. ಇವರ ಮುಖ್ಯ ಆಹಾರ ಹಿಟ್ಟಿನ ಗಂಜಿ ಮತ್ತು ಅನ್ನ. ಮಹುವಾ ಎಂಬ ಗಿಡದ ಹೂಗಳಿಂದ ತಯಾರಿಸಿದ ಮದ್ಯ ಇವರಿಗೆ ಬಲು ಪ್ರಿಯ.

	ಗೊಂಡರ ಹಳ್ಳಿಗಳಲ್ಲಿ ಸಾಮಾನ್ಯವಾಗಿ 50 ಗುಡಿಸಲುಗಳು ಇರುತ್ತವೆ. ಇವಕ್ಕೆ 'ತೋಲಾ ಎನ್ನುತ್ತಾರೆ. ಹಳ್ಳಿಗಳ ಮಧ್ಯದಲ್ಲಿ ಗುಡಿಸಲುಗಳು ಇರುತ್ತವೆ. ಅಲ್ಲದೆ ಇವುಗಳ ಪೂರ್ವ ಭಾಗದಲ್ಲಿ, ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಹಿರಿಯರ ಸ್ಮಾರಕಗಳಿರುತ್ತವೆ.

	ಗೊಂಡರಲ್ಲಿ ಎರಡು ಪ್ರಮುಖ ಗುಂಪುಗಳಿವೆ. ಒಂದು ಪಂಗಡದವರು ಇನ್ನೂಂದರ ಜೊತೆಗೆ ವಿವಾಹವಾಗಲಾರರು. ಏಕೆಂದರೆ ಅವರಲ್ಲಿ ದಾಯಾದಿ ಸಂಬಂಧವಿದೆ ಎಂದು ತಿಳಿಯುತ್ತಾರೆ. ಮಧ್ಯಪ್ರದೇಶದ ಬಸ್ತಾರಿನ ಒಂದು ಗುಂಪಿನಲ್ಲಿ 96 ಕುಲಗಳು ಇನ್ನೊಂದರಲ್ಲಿ 69 ಕುಲಗಳಿರುವುದು ಕಂಡು ಬರುತ್ತದೆ. ಅಲ್ಲದೆ ಒಂದು ಗುಂಪಿನಲ್ಲಿ ಆರು ದೇವತೆಗಳನ್ನು ಪೂಜಿಸಿದರೆ, ಮತ್ತೊಂದು ಗುಂಪಿನಲ್ಲಿ ಏಳು ದೇವತೆಗಳನ್ನು ಪೂಜಿಸುವರು. ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಗೊಂಡರಲ್ಲಿ ಭಿನ್ನತೆಯಿದೆ. ಉದಾಹರಣೆಗೆ: ಮಹಾರಾಷ್ಟ್ರದ ಚಾಂದಾ ಜಿಲ್ಲೆಯ ಗೊಂಡರಲ್ಲಿ ನಾಲ್ಕು ಭಾಗಗಳು ಇವೆ. ಇವುಗಳಿಗೆ 'ಬಿರಾದಾರಿ' ಎನ್ನುವರು. ಮಧ್ಯಪ್ರದೇಶದ ಮುಡಿಯಾ ಗೊಂಡರಲ್ಲಿ ಐದು ಭಾಗಗಳಿವೆ. ಸಹೋದರ ಸಂಬಂಧವಿರುವುದೆಂದು ತಿಳಿದ ಕಾರಣ ಇವರ ನಡುವೆ ವೈವಾಹಿಕ ಸಂಬಂಧವಿಲ್ಲ. ಗೊಂಡರಲ್ಲಿ 'ಕುರ ಎಂದು ಕರೆಯುವ ಕುಲಗಳು ಇವೆ.

	ಗೊಂಡರು ಏಕಪತ್ನಿವ್ರತಸ್ಥರು. ಬಹುಪತ್ತಿತ್ವ ಇವರಲ್ಲಿ ಬಲು ಅಪರೂಪ. ತಂದೆಯ-ತಂಗಿಯ ಮತ್ತು ತಾಯಿಯ ಅಣ್ಣನ ಮಕ್ಕಳ ಮದುವೆ ರೂಢಿಯಲ್ಲಿದೆ. ಗಂಡ ಸತ್ತರೆ ಗಂಡನ ತಮ್ಮನನ್ನು ಮದುವೆಯಾಗುವುದು ಸಂಪ್ರದಾಯ. ಮುಡಿಯಾ ಗೊಂಡರಲ್ಲಿ 'ಘೋಟುಲ ಎಂಬ ಸ್ವಾರಸ್ಯಕರವಾದ ಸಂಸ್ಥೆಯಿದೆ. ಮದುವೆಯಾಗದ ಹುಡುಗ ಹುಡುಗಿಯರು ರಾತ್ರಿಯಲ್ಲಿ ನಿಗದಿಪಡಿಸಿದ ಒಂದು ಮನೆಯಲ್ಲಿ ಒಟ್ಟಿಗೆ ಮಲಗುವರು. ಹುಡುಗರಿಗೆ 'ಚೆಲಿಕೆ ಎಂದು ಹುಡುಗಿಯರಿಗೆ 'ಮೊಟಿಯಾರಿ' ಎಂದು ಕರೆಯುವರು. ಇವರಿಗೆ ಒಬ್ಬ ಯಜಮಾನ ಇರುತ್ತಾನೆ. ಮಧ್ಯರಾತ್ರಿಯವರೆಗೆ ಹಾಡು ಕುಣಿತಗಳಲ್ಲಿ ಮಗ್ನರಾಗುವರು. ಮದುವೆಯಾಗುವ ತನಕ ಈ ಸಂಸ್ಥೆಯ ಸದಸ್ಯರಾಗುವುದು ಕಡ್ಡಾಯ.

	ಪ್ರಕೃತಿಯಲ್ಲಿರುವ ಶಕ್ತಿಗಳನ್ನು ಮರಗಿಡಗಳನ್ನು ಇವರು ಆರಾಧಿಸುವರು. ಒಬ್ಬ ತರುಣ ಮದುವೆಯಾಗುವ ಮೊದಲೇ ತೀರಿಕೊಂಡರೆ ಅವನ ಪ್ರೇತಾತ್ಮವನ್ನು ಪೂಜಿಸುವರು. ಸತ್ತ ಹಿರಿಯರ ಸ್ಮಾರಕಗಳೇ ಅನೇಕರ ಮನೆದೇವರುಗಳು. ಇವು ಕಲ್ಲಿನ ಹರಳುಗಳ ರೂಪದಲ್ಲಿರುತ್ತವೆ. ಇವುಗಳಿಗೆ ವರ್ಷಕ್ಕೆ ಒಮ್ಮೆ ಹಬ್ಬವನ್ನು ಆಚರಿಸುವರು. ಕಾಲರಾ, ಮೈಲಿಬೇನೆ ಇತ್ಯಾದಿಗಳಿಗೆ 'ಮಾತೃದೇವತೆ ಕಾರಣವೆಂದು ಪೂಜೆ ನಡೆಸುವರು. ಶಿವ, ಕಾಳಿ ಮುಂತಾದ ದೇವತೆಗಳ ಪ್ರಭಾವ ಗೊಂಡರಲ್ಲಿ ವಿಪುಲವಾಗಿದೆ.

	ಭಿಲ್ಲರು: ಭಿಲ್ಲರು ಎಂಬ ಪದ ಬಹುಶ: ಬಿಲ್ಲಿನಿಂದ ಬಂದಿದೆ. ಭಿಲ್ಲರು ಉತ್ತಮ ಬಿಲ್ಲುಗಾರರು. ಈ ಬುಡಕಟ್ಟುಗಳ ಜನರು ಹೆಚ್ಚಾಗಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ವಾಸವಾಗಿ ಇದ್ದಾರೆ. 'ಭಿಲ್ಲ ಎಂಬುದು ಇವರ ಆಡು ಭಾಷೆ. ಇವರು ಪೂರ್ವ ದ್ರಾವಿಡರೆಂದು ವಿದ್ವಾಂಸರಾದ ಹ್ಯಾಡೋನ್, ದ್ರಾವಿಡರೆಂದು ರಿಸ್ಲೆ ಮತ್ತು ಕ್ರೂಕ್ ಅವರು ಅಭಿಪ್ರಾಯ ಪಟ್ಟು ಭಿಲ್ಲರು ಪ್ರೋಟೊ ಆಸ್ಟ್ರಲಾಯಿಡರೆಂದು ಗುಹಾ ಎಂಬವರು ಅಭಿಪ್ರಾಯ ಪಟ್ಟಿದ್ದಾರೆ. ಸಂಸ್ಕ್ರತ ಸಾಹಿತ್ಯದಲ್ಲಿ ಬರುವ 'ನಿಷಾಧರು ಇಂದಿನ ಭಿಲ್ಲರೆಂದು ಊಹಿಸಲಾಗಿದೆ.

	ಭಿಲ್ಲರು ನೇಗಿಲ ಕೃಷಿ ಮಾಡಿ ಜೋಳ, ಗೋದಿ, ಸಜ್ಚೆ, ಬಾರ್ಲಿ ಮುಸುಕಿನ ಜೋಳ, ಬತ್ತ ಇತ್ಯಾದಿ ಬೆಳೆಗಳನ್ನು ಬೆಳೆಸುವರು, ಎತ್ತು, ಎಮ್ಮೆ, ಹಸು, ಕೋಳಿ ಮುಂತಾದವನ್ನು ಸಾಕುವರು. ಕೆರೆಕಟ್ಟೆಗಳಲ್ಲಿ ಮೀನು ಹಿಡಿಯುವುದು, ಬೇಟೆಯಾಡುವುದು ಇವರ ಹವ್ಯಾಸಗಳು.

	ಭಿಲ್ಲರ ಹಳ್ಳಿಗಳು ಬೆಟ್ಟದ ಇಳಿಜಾರು ಇಲ್ಲವೆ ಹೊಳೆಯ ಬದಿಯಲ್ಲಿರುತ್ತವೆ. ಹಳ್ಳಿಗಳ ಹೊರವಲಯದಲ್ಲಿ ಗ್ರಾಮದೇವತೆಗಳ ಗುಡಿಗಳನ್ನೂ ಹಿರಿಯರ ಸ್ಮಾರಕಗಳನ್ನೂ ಕಾಣಬಹುದು. ಅರಣ್ಯ ವಸ್ತುಗಳಿಂದ ಮನೆ ಕಟ್ಟುವರು. ಗಂಡಸರು ಸೊಂಟಕ್ಕೆ ಪಟ್ಟಿ ಕಟ್ಟಿ ಅದನ್ನು ಮೊಳಕಾಲಿನವರೆಗೆ ಇಳಿ ಬಿಡುವರು. ಅಂಗಿ ಹಾಕಿಕೊಳ್ಳುವರು, ತಲೆಗೊಂದು ಪೇಟ ಸುತ್ತುವರು. ಹೆಂಗಸರು ಸೀರೆ ಉಟ್ಟು ರವಿಕೆ ಧರಿಸುವರು. ಗಂಡಸರು ಮತ್ತು ಹೆಂಗಸರು ಬಳ್ಳಿಗಳಿಂದ ಮಾಡಿದ ಕಿವಿಯುಂಗುರಗಳನ್ನು ಧರಿಸುವರು.

	ಭಿಲ್ಲರಲ್ಲಿ ಪಿತೃಗಳನ್ನು ಆರಾಧಿಸುವ, ಪ್ರಾಣಿ ಇಲ್ಲವೆ ಸಸ್ಯವನ್ನು ಆರಾಧಿಸುವ ಕುಲಗಳಿವೆ. ಕುಟುಂಬಕ್ಕೆ ಇವರು ವಾಸಿಲು ಎಂದು ಕರೆಯುತ್ತಾರೆ. ತಂದೆಯ ತಂಗಿಯ ಮತ್ತು ತಾಯಿಯ ಅಣ್ಣನ ಮಗಳನ್ನು ವರ ಮದುವೆಯಾಗಬಹುದು. ಗಂಡ ಸತ್ತರೆ ವಿಧವೆ ಗಂಡನ ತಮ್ಮನನ್ನೇ ಮದುವೆಯಾಗುವ ಕ್ರಮ ಬಳಕೆಯಲ್ಲಿದೆ.

	ಭಿಲ್ಲರ ಯಜಮಾನನಿಗೆ ವಾಸವ ಎನ್ನುವರು. ಅವನು ಜನರ ಸಮಸ್ಯೆಗಳನ್ನು ಪರಿಹರಿಸುವನಲ್ಲದೆ, ಹಬ್ಬಹರಿದಿನಗಳಲ್ಲೂ ಪ್ರಧಾನ ಪಾತ್ರವಹಿಸುವನು. ವಾರ್ತಾನಿಯ ಎಂಬಾತನಿಗೆ ಸುದ್ದಿ ಸಾರುವ ಕೆಲಸ. ಹತ್ತು ಹನ್ನೆರಡು ಹಳ್ಳಿಗಳಿಗೂಬ್ಬ ದೇಶಮುಖ ಇದ್ದು ಈತ ಜನಾಂಗದವರ ಯೋಗಕ್ಷೇಮ ನೋಡಿಕೊಳ್ಳುವನು.

	ಭಿಲ್ಲರು ಅಗ್ನಿ ಆರಾಧಕರು. ಹಿರಿಯರ ಪ್ರೇತಾತ್ಮಗಳನ್ನು ಆರಾಧಿಸಿ ವರ್ಷಕೊಮ್ಮೆ ಸುಗ್ಗಿಕಾಲದಲ್ಲಿ ಜಮೀನುಗಳಲ್ಲಿ ಹಬ್ಬ ಆಚರಿಸುವರು. ಹಳ್ಳಿಗಳಲ್ಲಿ ತೆರೆದ ಗುಡಿಸಲುಗಳು ಇದ್ದು ತಮ್ಮ ದೇವತೆಗಳನ್ನು ಅಲ್ಲಿ ಇಟ್ಟು ಪೂಜಿಸುವರು. ಪುಂಜಾರೋ ದೇವರ ಪೂಜಾರಿ. ಆದರೆ ಭಗತೆ ಇಲ್ಲವೆ ಬಡವ ಎಂಬವರಿದ್ದು ಇವರು ಭೂತಪ್ರೇತವನ್ನು ಆರಾಧಿಸಿ, ಮಾಟ ಮಂತ್ರಗಳನ್ನು ಮಾಡಿಸುವರು. ಮಣ್ಣಿನಿಂದ ಮಾಡಿದ ಕುದುರೆ, ಜೇನುಗೂಡಿನ ಆಕಾರದ ಪಾತ್ರೆಗಳನ್ನು ಅಲ್ಲದೆ ಕೋಳಿ, ಕುರಿ ಮತ್ತು ಮದ್ಯವನ್ನು ಭೂತಗಳಿಗೆ ಸಮರ್ಪಿಸುವರು. ಮೃತವ್ಯಕ್ತಿ ಕನಸಿನಲ್ಲಿ ಬಂದು ಅವರ ಕಷ್ಟಗಳನ್ನು ನಿವಾರಿಸಲು ಸಹಾಯ ಮಾಡುವನೆಂಬ ನಂಬಿಕೆ ಉಂಟು.

	ನಾಗಾ: ನಾಗಾಲ್ಯಾಂಡಿನ ಮೂಲವಾಸಿಗಳಾದ ಇವರಲ್ಲಿ ಹದಿನಾಲ್ಕು ಪ್ರಮುಖ ಬುಡಕಟ್ಟುಗಳಿವೆ. ಮಹಾಭಾರತದಲ್ಲಿ 'ಕಿರಾತ ರೆಂದು ಉಲ್ಲೇಖಿಸಲ್ಪಟ್ಟ ಜನರು ಇವರೇ ಎಂದು ತಿಳಿದುಬಂದಿದೆ. ಮಂಗೋಲಾಯಡ್ ಜನಾಂಗಕ್ಕೆ ಸೇರಿದ ಇವರ ಭಾಷೆ ಟಿಬೆಟೊ ಬರ್ಮನ್ ಭಾಷಾ ವರ್ಗಕ್ಕೆ ಸೇರಿದೆ. ನಾಗಾ ಜನರ ಗ್ರಾಮಗಳನ್ನು ಎರಡು ಇಲ್ಲವೆ ಮೂರು ಖಿಲಗಳಲ್ಲಿ (ಭಾಗ) ವಿಭಾಗಿಸಲಾಗಿದೆ. ಗ್ರಾಮದ ಹಿರಿಯರು ಆಂತರಿಕ ಆಡಳಿತವನ್ನು ನೋಡಿಕೊಳ್ಳುತ್ತಾರೆ. 'ಮೆಟ್ಟಿಲು ಕೃಷಿ ಯಿಂದ ನಾಗಾ ಜನಜೀವನ ಸಾಗಿದೆ. ಅಕ್ಕಿಯೇ ಮುಖ್ಯ ಆಹಾರ. ಅಕ್ಕಿಯಿಂದ ತಯಾರಿಸಿದ ಮಾದಕ ಪಾನೀಯ ವಿಶೇಷವಾಗಿ ಬಳಕೆಯಲ್ಲಿದೆ.

	ನಾಗಾ ಜನರ ಉಡುಪು ಗಿಡ್ದ ಲಂಗ ಮತ್ತು ಶಾಲು. ಸ್ತ್ರೀಯರು ಚಿಕ್ಕ ಕೈಮಗ್ಗಗಳಲ್ಲಿ ಕಲಾತ್ಮಕವಾಗಿ ಬಟ್ಟೆಗಳನ್ನು ನೇಯುತ್ತಾರೆ. ನಾಗಾ ಜನರ ಸಾಂಸ್ಕ್ರತಿಕ ಜೀವನದಲ್ಲಿ 'ವೊರಂಗ ಎಂಬ ನಿದ್ರಾಶಾಲೆ, ಉದ್ದನೆಯ ದಾರುವಾದ್ಯ ಮತ್ತು 'ಅರ್ಹತೆಯ ಹಬ್ಬ ಮುಖ್ಯವಾದವುಗಳು, ಅವಿವಾಹಿತ ನಾಗಾ ಯುವಕರು ಇವರ ಗ್ರಾಮದಲ್ಲಿರುವ 'ವೊರಂಗ ಮನೆಯಲ್ಲಿ ಒಟ್ಟಾಗಿ ಮಲಗುವರು. ಎಲ್ಲ ಸಂದರ್ಭಗಳಲ್ಲಿ ದಾರುವಾದ್ಯವನ್ನು ಸಾಮೂಹಿಕವಾಗಿ ಬಾರಿಸುವರು. 'ಅರ್ಹತೆಯ ಹಬ್ಬವನ್ನು ನಾಗಾ ದಂಪತಿಗಳು ವಿಧಿ ಪೂರ್ವಕವಾಗಿ ಆಚರಿಸುವಾಗ ಯುವಕರು ದೂರದಿಂದ ಕಲ್ಲುಬಂಡೆಯೊಂದನ್ನು ದೂಡಿಕೊಂಡು ತರುತ್ತಾರೆ. ಅನಂತರ ಎಲ್ಲರಿಗೂ ಧಾರಾಳವಾಗಿ ಮಿಥುನ (ಎತ್ತು) ಮತ್ತು ಹಂದಿಗಳ ಮಾಂಸದ ಜೊತೆಗೆ ಅಕ್ಕಿ ಮದ್ಯದ ವಿತರಣೆಯಾಗುತ್ತದೆ.

	ಹಿಂದೆ ನಾಗಾ ಜನರು 'ತಲೆಬೇಟೆಯಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ತಲೆಬೇಟೆಯಾಡದ ಯುವಕನಿಗೆ ವಧು ಸಿಕ್ಕುವುದು ದುಸ್ತರವಾಗುತ್ತಿತ್ತಂತೆ. ಈ ಪದ್ಧತಿ ನಿಲ್ಲುತ್ತ ಬಂದಿದೆ. ಟುಯನ್ಸಾಂಗ ಜಿಲ್ಲೆಯಲ್ಲಿ ಇನ್ನೂ ಇದರ ಹುಮ್ಮಸ್ಸು ಮಾಯಾವಾದಂತಿಲ್ಲ; ಈ ಭಾಗದಲ್ಲಿ 1969ರಲ್ಲಿ ತಲೆಬೇಟೆಯಾಡಿದ ವರದಿಗಳಿವೆ. ನಾಗಾ ಜನರಲ್ಲಿ ಬಹುಪತ್ನಿತ್ವ ಬಳಕೆಯಲ್ಲಿದೆ. ಭಿನ್ನಕುಲ ವಿವಾಹ ಪದ್ಧತಿಯಿದ್ದರೂ ಕೊನ್ಯಾಕ್ ನಾಗಾಜನರ ಮುಖ್ಯಸ್ಥ ಮಾತ್ರ ತನ್ನ ಪ್ರಧಾನ ಹೆಂಡತಿಯನ್ನು ತನ್ನ ಕುಲದಲ್ಲಿಯೇ ಆರಿಸಿಕೊಳ್ಳುತ್ತಾನೆ. ನಾಗಾ ಜನರ ಧಾರ್ಮಿಕ ನಂಬುಗೆಗಳಲ್ಲಿ ಸೃಷ್ಟಿಕರ್ತನ ಕಲ್ಪನೆಯಿದೆ. ದುಷ್ಟ ಮತ್ತು ಶಿಷ್ಟ ಆತ್ಮಗಳಿಗೆ ತಮ್ಮವೇ ಸ್ಥಾನಗಳಿವೆ. ನಾಗರಿಕ ಪ್ರಭಾವದಿಂದಾಗಿ ನಶಿಸುತ್ತಿರುವ ತಮ್ಮ ಸಂಸ್ಕøತಿ ಸ್ವರೂಪವನ್ನು ಕಾಯ್ದುಕೊಳ್ಳುಲು ನಾಗಾಮಂದಿ ಶ್ರಮಿಸುತ್ತಿದ್ದಾರೆ.

	ತೊದವರು: ತಮಿಳುನಾಡಿನ ನೀಲಗಿರಿ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ತೊದವರು ಬಹುಪತಿತ್ವ ಪದ್ಧತಿಯಿಂದಾಗಿ ಸಮಾಜವಿಜ್ಞಾನಗಳ ಕುತೂಹಲಕ್ಕೆ ಕಾರಣರಾಗಿದ್ದಾರೆ. ಜನಸಂಖ್ಯೆ 946 (1961). ತೊದವರು ತಮ್ಮ ವಾಸದ ನೆಲೆಗಳನ್ನು 'ಮಂಡ್ ಎಂಬುದಾಗಿ ಕರೆಯುತ್ತಾರೆ. ಇವರ ಗುಡಿಸಲು ಅರೆಕೊಳವಿಯಾಕಾರದ ಚಾವಣಿಯುಳ್ಳ ನಾಲ್ಕು ಚಕ್ರದ ಬಂಡಿಯ ಹೊದಿಕೆಯ ರೂಪದಲ್ಲಿರುತ್ತದೆ. ಬಾಗಿಲುಗಳು ಬಲು ಚಿಕ್ಕವು. ದೈಹಿಕ ರಚನೆಯಲ್ಲಿ ಗೌರವರ್ಣದ ಚಪ್ಪಟೆ ಮೂಗಿನ ಎತ್ತರದ ನಿಲುವಿನ ಇವರು ಇತರ ಬುಡಕಟ್ಟು ಜನರಿಗಿಂತ ಭಿನ್ನರಾಗಿದ್ದಾರೆ. ಎಮ್ಮೆಗಳ ಹೈನಿನ ಮೇಲೆಯೇ ಇವರ ಜೀವನ. ಮುಖ್ಯ ಆಹಾರ ಅಕ್ಕಿ ಮತ್ತು ಹೈನಿನ ಪದಾರ್ಥಗಳು. ಮೃತರಿಗೆ ಬಲಿಕೊಟ್ಟ ಎಮ್ಮೆಗಳ ಮಾಂಸವನ್ನು ಪ್ರಸಾದ ರೂಪವಾಗಿ ಸ್ವೀಕರಿಸುವ ಪದ್ಧತಿಯಿದೆ.

	ತೊದವರು ಸೊಂಟಕ್ಕೆ ತುಂಡು ಬಟ್ಟೆ ಮತ್ತು ಮೇಲೆ ಹೊದಿಕೆಯನ್ನು ಧರಿಸುತ್ತಾರೆ. ಇದನ್ನು ಅವರ ಭಾಷೆಯಲ್ಲಿ 'ಪೂತೂಲಿ ಎಂದು ಕರೆಯುತ್ತಾರೆ. ಎಮ್ಮೆಗಳನ್ನು ಸಾಮಾನ್ಯ ಮತ್ತು ಪವಿತ್ರ ಎಂದು ವಿಂಗಡಿಸಿ ಅವುಗಳಿಗಾಗಿ ಹೈನಿನ ಮನೆ ಮತ್ತು ಅವುಗಳ ಪೂಜಾ ವಿಧಿಗಾಗಿ ಹೈನಿಗರನ್ನು ನೇಮಿಸಿರುತ್ತಾರೆ. ಹೈನಿನ ಮನೆಗಳಲ್ಲಿ ವಿಶೇಷವಾಗಿ 'ಟಿ' ಎಂಬವು ಪವಿತ್ರವಾದವು. ಅವುಗಳ ಹೈನಿಗರನ್ನು ಪಾಲೊಲ ಎಂದು ಕರೆಯುತ್ತಾರೆ. ಅವರು ಅತ್ಯಂತ ಕಠಿಣ ನಿಯಮಗಳನ್ನು ಹದಿನೆಂಟು ವರ್ಷದ ತನಕ ಅನುಸರಿಸಬೇಕಾಗುತ್ತದೆ. ತೊದವರಿಗೆ ಈ ಪವಿತ್ರ ಹೈನಿನ ಮನೆಗಳೇ ಗುಡಿಗಳು. ತೊದವರಲ್ಲಿ ತಾರ್ದರ್ ಮತ್ತು ತೇವಲಿ ಎಂಬ ಎರಡು ಪಂಗಡಗಳಿವೆ. ತಾರ್ದರ್ ಪಂಗಡದಲ್ಲಿ ಹನ್ನೆರಡು ಕುಲಗಳೂ ತೇವನ್ನರಲ್ಲಿ ಆರು ಕುಲಗಳೂ ಇವೆ. ಅಣ್ಣತಮ್ಮಂದಿರಿಗೆ ಒಬ್ಬಳೇ ಹೆಂಡತಿ. ಮೊದಲು ಇವರಲ್ಲಿ ಹೆಣ್ಣು ಮಗುವಿನ ಹತ್ಯೆ ಬಳಕೆಯಲ್ಲಿತ್ತಂತೆ. ವಿವಾಹಿತ ಸ್ತ್ರೀ ಗರ್ಭಿಣಿಯಾದಾಗ ಪಿತೃತ್ವವನ್ನು ನಿರ್ಧರಿಸಲು ಗಂಡಂದಿರಲ್ಲಿ ಯಾರಾದರೊಬ್ಬರು ಅವಳಿಗೆ ಬಿಲ್ಲುಬಾಣಗಳನ್ನು ಸಮರ್ಪಿಸಬೇಕು. ಈ ವಿಧಿಯನ್ನು ಸ್ತ್ರೀ ಏಳನೇ ತಿಂಗಳು ಗರ್ಭಿಣಿಯಾಗಿದ್ದಾಗ ಮಾಡಬೇಕಾಗುತ್ತದೆ. ಮೃತರ ಅಂತ್ಯಸಂಸ್ಕಾರ ವೈಚಿತ್ರ್ಯಪೂರ್ಣವಾಗಿ, ಕ್ರಮವಾಗಿ ಹಸಕೇಡು ಮತ್ತು ಬರಕೇಡು ಎಂದು ಎರಡು ಹಂತಗಳಲ್ಲಿ ನಡೆಯುತ್ತದೆ. ಆಗ ಎಮ್ಮೆಗಳ ಬಲಿ ಕೊಡುವುದು ತೊದವರಿಗೆ ಅನಿವಾರ್ಯ.

	ತೊದವರ ದೇವರುಗಳಲ್ಲಿ ತೀಕಿರ್ಜಿ ಮತ್ತು ಓನ್ ಮುಖ್ಯವಾದವು. ತೀಕಿರ್ಜಿ ಸ್ತ್ರೀ ದೈವ, ಓನ್ ಪುರುಷದೈವ. ತೀಕಿರ್ಜಿ ಓನ್‍ನ ಹಿರಿಯ ಸೋದರಿ ಎಂದು ಪ್ರತೀತಿ. ತೊದವರಲ್ಲಿ ಇಂದು ಸುಮಾರು 150 ಮಂದಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದಾರೆ. ಉದಕಮಂಡಲದಂಥ ನಗರ ಅಭಿವೃದ್ಧಿ ಮತ್ತು ಚಹದ ತೋಟಗಳ ವಿಸ್ತಾರ ಇವು ತೊದವರ ಎಮ್ಮೆ ಸಾಕಣೆಯನ್ನು ಕುಂಠಿತಗೊಳಿಸಿವೆ.

	ಸೋಲಿಗರು: ಇವರ ಹೆಸರು ತಮಿಳು ಪದ ಸೋಲೈ(ಪೂದರು) ಎಂಬುದರಿಂದ ಬಂದಿದೆ. ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಜನಸಂಖ್ಯೆ 2639 (1971). ಸೋಲಿಗರಲ್ಲಿ ಮುಖ್ಯವಾಗಿ ಐದು ಕುಲದವರು ಮತ್ತು ಏಳು ಕುಲದವರು ಎಂಬ ಎರಡು ಪಂಗಡಗಳಿವೆ. ಕೊಳ್ಳೇಗಾಲದ ಮಹದೇಶ್ವರ ಬೆಟ್ಟದಲ್ಲಿ ಪೂಜಾರಿ ಸೋಲಿಗರು ವಾಸಿಸುತ್ತಾರೆ. ಇವರು ಯಾವ ಜನಾಂಗಕ್ಕೆ ಸೇರಿದವರೆಂಬ ವಿಷಯ ಖಚಿತವಾಗಿ ತಿಳಿದುಬಂದಿಲ್ಲ. ಸೋಲಿಗರು ಪೂರ್ವ ದ್ರಾವಿಡರೆಂದು ಕೆಲವರ ಅಭಿಪ್ರಾಯ. ಐದು ಕುಲದವರ ಆಡುನುಡಿ ಕನ್ನಡ. ಏಳು ಕುಲದವರದು ತಮಿಳು ಮಿಶ್ರಿತ ಕನ್ನಡ.

	ಸೋಲಿಗರಲ್ಲಿ ಕುಲಗಳು ಮುಖ್ಯ. ಉದಾಹರಣೆಗೆ ಐದು ಕುಲದವರಲ್ಲಿ ಶಫಕಿರಿ, ಸೂರ, ಬೆಳ್ಳಿ, ತೆನೆ, ಹಾಲು ಎಂಬುದಾಗಿ ಇದ್ದು ಅದೇ ಕುಲದಲ್ಲಿ ಮದುವೆಯಾಗುವಂತಿಲ್ಲ. ಬಿಳಿಗಿರಿ ರಂಗನ ಬೆಟ್ಟದ ಸೋಲಿಗರಲ್ಲಿ ಬಳೆ ಕುಲದವರ ಸ್ಥಾನಮಾನ ಕಡಿಮೆ. ಹುಡುಗ ತಾನು ಇಚ್ಛಸಿದ ಹುಡುಗಿಯೊಂದಿಗೆ ಕಾಡಿನಲ್ಲಿ ಮೂರು ನಾಲ್ಕು ದಿನಗಳವರೆಗೆ ಇದ್ದು ಅನಂತರ ತಿರುಗಿ ತಮ್ಮ ಪೋಡಿಗೆ ಬಂದು ಪಂಗಡದ ಜನರಿಗೆ ಊಟವೋ ಉಪಾಹಾರವೋ ಕೊಟ್ಟಾಗ ಮದುವೆಯಾದಂತೆ. ತಂದೆಯ ಅಕ್ಕ, ತಂಗಿ, ಮತ್ತು ತಾಯಿಯ ಅಣ್ಣನ ಮಗಳೊಡನೆ ಮದುವೆ ಸಾಧ್ಯ. ವಿವಾಹ ವಿಚ್ಛೇದನೆ ಬಳಕೆಯಲ್ಲಿದೆ. ಗುಡಿಯಲ್ಲಿ ಅಥವಾ ಚಪ್ಪರ ಹಾಕಿ ಮದುವೆ ಮಾಡುವ ರೂಢಿ ಹಲವು ವರ್ಷಗಳಿಂದ ಬಳಕೆಯಲ್ಲಿ ಬಂದಿದೆ.

	ಸತ್ತವರನ್ನು ನಿಗದಿಪಡಿಸಿದ ಸ್ವಂತ ಕುಲದ ಜಾಗದಲ್ಲಿ ಹೂಳುವರು. ಸಾಧ್ಯವಾದಲ್ಲಿ ಅಲ್ಲಿಯೇ 'ಹಿಂಡೆಕೂಳು (ತಿಥಿ) ಮಾಡುವರು. ಆ ದಿನ ಎಲ್ಲ ಕುಲದವರೂ ಬರುವರು. ಸತ್ತವರ ಪ್ರೇತವನ್ನು ಕಲ್ಲುಗೊಂಬೆಯಲ್ಲಿ ಹಿಡಿದಿಟ್ಟು ಅನಂತರ ಅನುಕೂಲವಾದಾಗ ವಂಶಸ್ಥರ 'ಕಲ್ಲುಗುಡಿಯಲ್ಲಿ ಇಡುವರು. ಕಾಡಿನಲ್ಲಿಯ ದುಷ್ಟ ಶಕ್ತಿಗಳನ್ನು ಪೂಜೆ ಮಾಡುವರು. ಮಾದೇಶ್ವರ, ನಂಜುಂಡೇಶ್ವರ, ರಂಗಸ್ವಾಮಿ, ಕುಂಭೇಶ್ವರ ಮುಂತಾದ ದೇವರನ್ನು ಪೂಜಿಸುವರು. ಜಡೆಸ್ವಾಮಿ, ಕೇತಪ್ಪ ಎಂಬ ದೇವರುಗಳು ತಮ್ಮವೇ ಎಂದು ಸೋಲಿಗರು ಹೇಳಿಕೊಳ್ಳುವರು. ಪೂಜಾರಿಗಳಿಗೆ ತಮ್ಮಡಿ ಎಂದು ಕರೆಯುತ್ತಾರೆ. ಇವರ ಮೈಮೇಲೆ ದೇವರುಗಳು ಬಂದಾಗ ಹೇಳಿಕೆ ಕೇಳಿಕೆ ನಡೆದು ಭಕ್ತಾದಿಗಳು ತಮ್ಮ ದೇವರುಗಳ ಆದೇಶಗಳಂತೆ ನಡೆಯುವರು. ಸ್ವಾತಂತ್ರ್ಯ ಬಯಸುವ ಇವರು ಕಾಡಿನಲ್ಲಿ ಇರಲು ಯಾವಾಗಲೂ ಇಚ್ಛೆಪಡುವರು.

	ಅಂಡಮಾನಿ: ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿರುವ ಅಂಡಮಾನ್ ದ್ವೀಪ ಸಮೂಹದಲ್ಲಿ ವಾಸವಾಗಿರುವ ಅಂಡಮಾನಿಯರು ನೀಗ್ರೋಯಿಡ್ ಜನಾಂಗಕ್ಕೆ ಸೇರಿದವರು. ಜನಸಂಖ್ಯೆ 63,548 (1961). ಇವರಾಡುವ ಭಾಷೆ ಅಂಡಮಾನಿ.

	ಅಂಡಮಾನಿಯರು ಅರಣ್ಯದಲ್ಲಿ ಮತ್ತು ಸಮುದ್ರದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಜೀವನ ನಡೆಸುವರು. ಬೇಟೆಗಾಗಿ ಬಿಲ್ಲುಬಾಣಗಳನ್ನೂ ಸಮುದ್ರದಲ್ಲಿ ಮೀನನ್ನು ಹಿಡಿಯಲು ಭರ್ಜಿಯನ್ನೂ ಉಪಯೋಗಿಸುವರು. ಗೆಡ್ಡೆಗೆಣಸು ಇವರ ದೈನಂದಿನ ಆಹಾರದ ಮುಖ್ಯಭಾಗ, ದೈನಂದಿನ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುವರು.

	ಸಮುದ್ರದಂಡೆಗೆ ಹತ್ತಿರವಾಗಿ ಅವರ ವಾಸಸ್ಥಳವಿರುತ್ತದೆ. ಆಗಾಗ್ಗೆ ಅವನ್ನು ಬದಲಿಸುವರು. ತಾವೇ ತಯಾರಿಸಿದ ದೋಣಿಗಳಲ್ಲಿ ಪ್ರಯಾಣಮಾಡುವರು. ಇವರು ಇರುವ ಜಾಗದಲ್ಲಿ ಒಂದೇ ಗುಡಿಸಲು ಕಟ್ಟಿ ಒಟ್ಟಿಗೆ ಗುಂಪಿನಲ್ಲಿ ವಾಸ ಮಾಡುವರು. ಬಟ್ಟೆ ಧರಿಸಿದ್ದರೂ ಮೂಳೆ, ಶಂಕು, ಬಿದಿರ, ಬಳ್ಳಿ ಮುಂತಾದವುಗಳಿಂದ ಮಾಡಿದ ಸೊಂಟಪಟ್ಟಿ, ಹಾರ, ತೋಳುಬಂದಿ ಇತ್ಯಾದಿ ಧರಿಸುವರು. ಚಿಕ್ಕಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ತಲೆ ಬೋಳಿಸಿಕೊಳ್ಳುವರು. ಗಂಡಸರು ಗಡ್ಡವನ್ನು ಬೋಳಿಸಿಕೊಳ್ಳುವುದಿಲ್ಲ. ಗಂಡು ಹೆಣ್ಣೆನ್ನದೆ ಭುಜ, ಹೊಟ್ಟೆ, ಬೆನ್ನು ಮತ್ತು ಕಾಲುಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವರು. ಅಲಂಕಾರದ ಅಂಗವಾಗಿ ಇಡೀ ದೇಹದಲ್ಲಿ ಮೂರು ತರಹದ ಬಣ್ಣಗಳನ್ನು ಹಚ್ಚಿಕೊಂಡು ಆನಂದಪಡುವರು.

	ಅಂಡಮಾನಿಯರಲ್ಲಿ ಏಕಪತ್ನಿತ್ವ ಜಾರಿಯಲ್ಲಿದೆ. ಮದುವೆಯ ಮೊದಲು ಗಂಡು ಹೆಣ್ಣುಗಳು ಕೂಡಿದರೂ ಮದುವೆಯಾದ ಅನಂತರ ಇದು ನಿಷೇಧ. ಗಂಡ ಸತ್ತಬಳಿಕ ವಿಧವೆ ಗಂಡನ ತಮ್ಮನನ್ನು ಮದುವೆಯಾಗಬಹುದು. ಸತ್ತಾಗ ಯುಕ್ತ ವಿಧಿಗಳನ್ನು ಆಚರಿಸಿ ಹೆಣವನ್ನು ಹೂಳಲಾಗುವುದು. ಇವರಲ್ಲಿ ಹಿರಿಯರು ಇದ್ದು ಅವರು ತಮ್ಮ ಜನರ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುವರು.

	ಅರಣ್ಯ ಮತ್ತು ಸಮುದ್ರದಲ್ಲಿ ಅಗೋಚರ ಶಕ್ತಿಗಳಿವೆಯೆಂದು ನಂಬಿ ಅವನ್ನು ಆರಾಧಿಸುವರು. ದುಷ್ಟಶಕ್ತಿಯಿಂದ ಕಾಯಿಲೆ ಬರುವುದೆಂದು ನಂಬಿಕೆ. ಅಲ್ಲದೆ ಮೃತರ ಆತ್ಮ ದುಷ್ಟ ಶಕ್ತಿಗಳ ಪ್ರತೀಕವೆಂದು ತಿಳಿದು, ಅವುಗಳಿಗೆ ಪೂಜೆ ಸಲ್ಲಿಸುವರು. ಮನುಷ್ಯಾಕಾರದ 'ಪುಲುಗ ಎಂಬ ದೇವರ ಆಕಾಶದಲ್ಲಿ ಇರುವನು ಎಂಬುದಾಗಿ ನಂಬಿದ್ದಾರೆ. ಸೂರ್ಯ ಚಂದ್ರನ ಹೆಂಡತಿಯೆಂದೂ ನಕ್ಷತ್ರಗಳು ಅವರಿಬ್ಬರ ಮಕ್ಕಳೆಂದೂ ಭಾವಿಸಿದ್ದಾರೆ. ಪುರೋಹಿತ ದುಷ್ಟ ಶಕ್ತಿಗಳನ್ನು ನಿಯಂತ್ರಿಸಬಲ್ಲವನಾದ್ದರಿಂದ ಅವನಿಗೆ ಕಾಣಿಕೆ ಸಲ್ಲಿಸುವರು.

	ಅಭಿವೃದ್ದಿ ಕಾರ್ಯಕ್ರಮಗಳು; ಬುಡಕಟ್ಟು ಜನರು ಇತರ ಜನರೊಡನೆ ಬೆರೆತಾಗ, ಅವರ ಸಂಸ್ಕ್ರತಿಗೆ ಧಕ್ಕೆ ಬರುವುದೆಂಬ ಕಾರಣ ಅವರನ್ನು ಬೇರೆ ಬೇರೆಯಾಗಿ ಸುರಕ್ಷಿತವಾಗಿ ಇಟ್ಟರೆ, ಅವರ ಸಂಸ್ಕøತಿ ಉಳಿಯುವುದೆಂದು ವೆರಿಯರ್ ಎಲ್ವಿನ್ ಹೇಳಿದ್ದರು. ಈ ವಾದವನ್ನು ಒಪ್ಪದೆ ಅವರ ಸರ್ವಾಂಗೀಣ ಉನ್ನತಿ ಅಗತ್ಯ ಅಲ್ಲದೆ ಅವರೂ ರಾಷ್ಟ್ರಾಭಿವೃದ್ಧಿಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ನೆಹರೂ ಅಭಿಪ್ರಾಯಪಟ್ಟಿದ್ದರು. ಈ ವಾದವನ್ನು ಅನೇಕ ಸಾಮಾಜಿಕ ಕಾರ್ಯಕರ್ತರು ಒಪ್ಪಿದ್ದರು. ಭಾರತ ಸಕಾರ ಈ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗಿ ಬುಡಕಟ್ಟು ಜನರ ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರಂತೆ ರಾಜ್ಯಾಂಗದಲ್ಲಿ ಬುಟಕಟ್ಟು ಜನರಿಗಾಗಿ ಶೇಕಡಾ ಏಳೂವರೆ ಹುದ್ದೆಗಳನ್ನು ಮತ್ತು ವಿದ್ಯಾಸಂಸ್ಥೆಗಳಲ್ಲಿ ಸ್ಥಾನಗಳನ್ನು ಮೀಸಲಾಗಿಡಲಾಗಿದೆ. ಇನ್ನೂ ಇತರ ಅನೇಕ ಸವಲತ್ತುಗಳನ್ನು ಬುಡಕಟ್ಟು ಜನರಿಗೆ ಕೊಡಲಾಗಿದೆ.

	ಬುಡಕಟ್ಟು ಜನರ ಪ್ರಗತಿಗಾಗಿ ಸರ್ಕಾರ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ವಿದ್ಯೆ, ಆರ್ಥಿಕ ಅಭಿವೃದ್ಧಿ, ಆರೋಗ್ಯ, ಮನೆಗಳು ಮತ್ತು ಸಂಪರ್ಕ ಸಾಧನಗಳಿಗಾಗಿ ಸುಮಾರು 19.83 ಕೋಟಿ ರೂಪಾಯಿಗಳನ್ನು ಖರ್ಚುಮಾಡಿದೆ. ನಾಲ್ಕನೆಯ ಯೋಜನೆಯಲ್ಲಿ 35.32 ಕೋಟಿ ರೂಪಾಯಿಗಳು ವೆಚ್ಚವಾಯಿತು. 5ನೆಯ ಮತ್ತು 6ನೆಯ ಯೋಜನೆಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಉಪಯೋಜನೆಗಳು ರೂಪಿಸಲ್ಪಟ್ಟಿವೆ. ಇವಲ್ಲದೆ ರಾಜ್ಯ ಸರ್ಕಾರಗಳು ಕೂಡ ತಮ್ಮ ಪಾಲಿನ ಹಣವನ್ನು ಬುಡಕಟ್ಟು ಜನರ ಕ್ಷೇಮಕ್ಕಾಗಿ ಖರ್ಚುಮಾಡುತ್ತಿವೆ. ಮಾನವ ವಿಜ್ಞಾನಿಗಳ ಅಭಿಪ್ರಾಯದಂತೆ ಬುಡಕಟ್ಟುಜನರ ಪರಿಸರ, ಸಮಸ್ಯೆ ಮತ್ತು ಆಶಯ ಮುಂತಾದವನ್ನು ಅಭ್ಯಸಿಸಿ ಯುಕ್ತವಾದ ಯೋಜನೆಗಳನ್ನು ರೂಪಿಸಿ ಸಫಲವಾಗಿ ಕಾರ್ಯಗತಗೊಳಿಸಿದರೆ, ಬುಡಕಟ್ಟು ಜನರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. 						
	(ಎಸ್.ಜಿ.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ